Friday, June 28, 2013

ಶ್ರೀ ಸಿದ್ಧ ಲಿಂಗೇಶ್ವರರ ವಚನ

           ಶ್ರೀ ಸಿದ್ಧ ಲಿಂಗೇಶ್ವರರ ವಚನ

            ಪ್ರಾಣಲಿಂಗ ಪೂಜೆ

                      “ಲಿಂಗದಲ್ಲಿ ಪ್ರಾಣವ ನಿಲಿಸಿ, ಪ್ರಾಣದಲ್ಲಿ ಲಿಂಗವನಿರಿಸಿ
                     ನೆನವುತ್ತಿಪ್ಪ ಕಾರಣ, ಪ್ರಾಣಲಿಂಗವಾಯಿತ್ತು.

                       ಆ ಲಿಂಗ ಸರ್ವ ಕರಣಂಗಳ ವೇದಿಸಿ,

                       ಕರಣಂಗಳು ಲಿಂಗ ಕಿರಣಂಗಳಾದ ಕಾರಣ,

                       ಒಳಗೆ ಕರತಲಾಮಲಕದಂತೆ ಲಿಂಗ ನೆಲೆಗೊಂಡಿತ್ತಾಗಿ

                       ಹೊರೆದೆನೆಂದು ಅರಿಯನು

                       ನಿಜಗುರು ಸ್ವತಂತ್ರಸಿದ್ಧಲಿಂಗೆಶ್ವರಾ, ನೀವು ಪ್ರಾಣಲಿಂಗವಾಗಿ.”
        
ಸಂದೇಶ: 
ಈ ವಚನವು ಪ್ರಾಣಲಿಂಗಸ್ಥಲದಲ್ಲಿ ಬರುತ್ತದೆ. ಭಕ್ತನು ಈ ವಿಶ್ವವೆಲ್ಲಾ ಸೃಷ್ಟಿಕರ್ತನ ಪ್ರಸಾದವೇ  ಎಂಬ ನಿರ್ಲಿಪ್ತ ಸ್ಥಿತಿಯಲ್ಲಿರುತ್ತಾನೆ. ಅದನ್ನು ಅನುಭವಿಸಲು ಪ್ರಾಣಲಿಂಗ ಪೂಜೆ ಮಾಡುತ್ತಾನೆ. ಅಂದರೆ, ಹೊರಗೆ ಇಷ್ಟಲಿಂಗದ ಅನುಸಂಧಾನ ಮಾಡಿದಂತೆ ಅಂತರಾಳದಲ್ಲಿಯೂ ಕೂಡ ಪ್ರಾಣಲಿಂಗದ ಅನುಭವವನ್ನು ಹೊಂದುತ್ತಾನೆ. ಹೀಗೆ ಮಾಡಿ ಆ ಎರಡರ ಅಭೇದವನ್ನು ಅನುಸಂಧಾನ ಮಾಡಿದಾಗ ಅದೇ ಪ್ರಾಣಲಿಂಗ ಪೂಜೆಯಾಗುತ್ತದೆ.

Monday, June 24, 2013

ಶರಣ ಘಟಿವಾಳಯ್ಯನವರ ವಚನ

ಶರಣ ಘಟಿವಾಳಯ್ಯನವರ ವಚನ
ಸಮಯಪ್ರಜ್ಞೆ 
“ಅರಿವ ಬಲ್ಲೆನೆಂದು ಬಿರುನುಡಿಯ ನುಡಿರೆ?
ಸತ್ಯವರಿದಂಗೆ ಮಿಥ್ಯಭಾವವುಂಟೆ?
ತಥ್ಯ ಮಿಥ್ಯ ಉಭಯಭಾವವಳಿದಿರಬೇಕು.
ಸಮಯವೆಂಬುದು ಸಂಪದ ಅದು ನಿನಗನ್ಯವೆ?”
ಸಂದೇಶ:
ಶರಣ ಘಟಿವಾಳಯ್ಯನವರು ಈ ವಚನದಲ್ಲಿ ನಾಳೆ  ಮಾಡಿದರಾಯಿತೆಂದು ಇಂದಿನ ವರ್ತಮಾನವನ್ನು ವ್ಯರ್ಥ ಮಾಡಿಕೊಳ್ಳಬಾರದೆಂದು ಹೇಳಿರುತ್ತಾರೆ. ಸಮಯವೆಂಬುದು ಸಂಪತ್ತಿದ್ದಂತೆ ಅದನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಉಪಯೋಗಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಎಂದು ತಿಳಿಸಿರುತ್ತಾರೆ. ಈ ವಚನದಲ್ಲಿ ಅವರು ಸಮಯಪ್ರಜ್ಞ್ಯೆ ಹಾಗೂ ಸತ್ಯಾಸತ್ಯಗಳನ್ನು ತಿಳಿಯುವ ಸ್ವಯಂಜ್ಞ್ಯಾನ ವನ್ನು ಹೊಂದುವ ರೀತಿ ಹೇಳಿದ್ದು ತುಂಬಾ ಮಾರ್ಮಿಕವಾಗಿದೆ.


Wednesday, June 19, 2013

ಶರಣ ಬಸವಣ್ಣನವರ ವಚನ

ವಚನ ಸಂದೇಶ...
       ಶರಣ ಬಸವಣ್ಣನವರ ವಚನ
   ಭಕ್ತಿವಿಶೇಷ
            ಭಕ್ತಿ  ವಿಶೇಷವ ಮಾಡುವರೆ  ಹತ್ತು ಬೆರಳುಗಳುಂಟು,
                                    ಹಾಸಿ ದುಡಿದರೆ ತನಗುಂಟು, ತನ್ನ ಪ್ರಥಮರಿಗುಂಟು,
                                    ಮಾರಿ ತಂದೆಗಳಂತೆ ಎನಗೇಕಹದಯ್ಯಾ
                                    ರತ್ನದ ಸಂಕಲೆಯನ್ನಿಕ್ಕಿ  ಕಾಡಿಹೇ
                                    ಕೂಡಲಸಂಗಮ ದೇವಾ, ಶಿವಧೋ, ಶಿವಧೋ \\

                                                              ಸಂದೇಶ:  
ಭಕ್ತಿ, ಸೇವೆ, ಪೂಜೆ ಮಾಡಲು  ಹತ್ತು ಬೆರಳುಗಳು ಇವೆ. 'ಅಗಸ ನೀರೋಳಗಿದ್ದು  ಬಾಯಾರಿಸಿದಂತೆ' ಒಳಗಿನ ಪರಮಾತ್ಮನನ್ನು ಬಿಟ್ಟು ಹೊರಗಿನ ದೇವರನ್ನು ಹುಡುಕುತಿದ್ದೇವೆ.

   ನಾವೇ ಸ್ವಯಂ ಪ್ರಕಾಶಿತರು. ಕಷ್ಟಪಟ್ಟು ಕಾಯಕದಲ್ಲಿ ಸಮಯ ವ್ಯಯಿಸಬೇಕೇ  ಹೊರತು  ಹೊರಗೆ ದೇವರನ್ನು ಹುಡುಕಲು ಸಮಯ ವ್ಯರ್ಥ  ಮಾಡಬಾರದು. ಬಂದುದರಲ್ಲಿಯೇ  ದಾಸೋಹ ಮಾಡಬೇಕು. ಕೂಡಿ ಬಾಳಬೇಕು.  ಇದು ಬಸವಣ್ಣನವರ ಪರಿಕಲ್ಪನೆ. ಲಿಂಗಪೂಜೆ ಇದು ವೈಯಕ್ತಿಕ  ಸಾಧನೆ. ಇಂದ್ರಿಯಗಳೆಲ್ಲ ಲಿಂಗವಾಗಬೇಕು. ಅದೇ ವಿಶೇಷ ಪೂಜೆ.
ಈ ವಚನ  ಷಟಸ್ಥಲಗಳಲ್ಲಿಯ ಒಂದು ವಚನ. ಇದು ನಾಲ್ಕು ಸಾಲಿನ ಚಿಂತನೆ. ಪರಾಧೀನತೆಯಲ್ಲಿದ್ದಾಗ  ಸ್ವಸಾಧನೆಗೆ ಅವಕಾಶವಿಲ್ಲದಿದ್ದಾಗ ಮನಸ್ಸು ತುಡಿಯುತ್ತದೆ.. ಬಸವಣ್ಣನವರು ತಾವು ರಾಜ್ಯದ ಮಂತ್ರಿಯಾಗಿದ್ದಾಗ ಅದು ಅವರಿಗೆ ರತ್ನಖಚಿತ ಬಂಗಾರದ  ಸಂಕೋಲೆಯಾಗಿತ್ತು. ಎಂದು ಹೇಳುತ್ತಾರೆ. ಮಾರಿತಂದೆಯಂತೆ ನನಗೆ  ಯಾಕೆ ಆಗಲಿಲ್ಲ.
ಭಕ್ತಿಯ ವಿಶೇಷ ಮಾಡುವದೇ  ಅನನ್ಯ ಪ್ರೀತಿಗೆ   ಭಕ್ಕ್ಕ್ತಿ ಹುಟ್ಟುವದು.  ಭಕ್ತಿ ವಿಶೇಷ ಮಾಡುವದೇ ಎರಡೂ ಕೈಗಳುಂಟು. ಅಂದರೆ ಪಂಚಕರ್ಮೇಂದ್ರಿಯಗಳು ಹಾಗೂ ಪಂಚಜ್ಞ್ಯಾನೆಂದ್ರಿಯಗಳು ಭಕ್ತಿ ವಿಶೇಷ ಕಾಯಕ. ನಾನು ದೊಡ್ದವನಾದರೆ ಮಾತ್ರ ಸಮಾಜ ದೊಡ್ಡದು. ಹಾಸಿ ದುಡಿವದೆ ಶ್ರಮಪಟ್ಟು, ಬೆವರು ಸುರಿಸಿ, ದುಡಿಯುವದು. ಈ ವಚನದಲ್ಲಿ ಬಸವಣ್ಣನವರ ಮನೋನಿವೇದನೆ, ತುಡಿತ, ಆತ್ಮನಿರೀಕ್ಷಣೆ, ಇದೆ.

Monday, June 10, 2013

ಶರಣ ಚಂದಿಮರಸರ ವಚನ

ವಚನ ಸಂದೇಶ...

                                       ಶರಣ ಚಂದಿಮರಸರ ವಚನ

                                           "ನಾಯ ಕುನ್ನಿಯ ಕಚ್ಚಬೇಡ ಬೊಗಳಬೇಡವೆಂದೆಡೆ                   

                               ಮಾಣ್ಪುದೇಹಂದಿಯನಶುದ್ಧವ ಹೊರಳಬೇಡವೆಂದೆಡೆ ಮಾಣ್ಪುದೇ?

                                             ನಯದಿಬುದ್ಧಿಗಲಿಸಿದದೆ ಮಾಣ್ಪುದೇ ತಮ್ಮ ಸಹಜವ?

                                       ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ?

                                                      ಹೇಳಾ ಸಿಮ್ಮಲಿಗೆಯ ಚೆನ್ನರಾಮಾ"



ಸಂದೇಶ 

  ಶರಣ ಚಂದಿಮರಸರು ಈ ವಚನದಲ್ಲಿ ಅತೀ ಸರಳ ಹಾಗೂ ಆಡುನುಡಿಗಳಲ್ಲಿ, ಬುದ್ದಿ ಹೇಳಿದ ರೀತಿಯಲ್ಲಿಯೇ  

ದುರ್ವ್ಯಸನಿಯನ್ನು ಕುಟಕಿದ್ದಾರೆ. ನಾಯಿ ಮತ್ತು ಹಂದಿಗಳು ಎಷ್ಟೇ ಬೋಧಿಸಿದರೂ ಕೂಡ ಹೇಗೆ ತಮ್ಮ ಸಹಜ ಗುಣಗಳನ್ನು 

ಬಿಡುವದಿಲ್ಲವೋ  ಹಾಗೆಯೇ ದುರ್ವ್ಯಸನಿಗಳು  ಸದ್ಗುರುಗಳ  ಬೋಧನೆಗೆ ತಮ್ಮ ದುರ್ನಡತೆಯನ್ನು ಬಿಡಲಾರರು ಎಂದು 

ಹೇಳಿದ್ದಾರೆ.

Thursday, June 6, 2013

ಶರಣ ಬಸವಣ್ಣನವರ ವಚನ~ಸಪ್ತಸೂತ್ರಗಳು

             ವಚನ ಸಂದೇಶ..
                                                    ಸಪ್ತಸೂತ್ರಗಳು
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ತನ್ನ ಬಣ್ಣಿಸಬೇಡ,
ಇದರ ಹಳಿಯಲು ಬೇಡ, ಅನ್ಯರಿಗೆ  ಅಸಹ್ಯ ಪಡಬೇಡ,
ಇದೇ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ,
                             ಇದೇ ನಮ್ಮ ಕೂಡಲಸಂಗಮ ದೇವರ ಒಲಿಸುವ ಪರಿ.                

                 ಸಂದೇಶ: 

ಬಸವಣ್ಣವರು ಈ ವಚನದ ಮೂಲಕ ಮಾನವ ಕುಲಕ್ಕೆ ಬದುಕಿನ ಮೌಲ್ಯಗಳನ್ನು ಸಪ್ತಸೂತ್ರಗಳರೂಪದಲ್ಲಿ ತಿಳಿಸಿದ್ದಾರೆ. ಈ ಸಪ್ತಸೂತ್ರಗಳು ಕೆಲವು ನಿಯಮಗಳನ್ನು ಹೊಂದಿವೆ.
 ಕಳಬೇಡ: ಕಳುವು ಇದೊಂದು ಸಾಮಾಜಿಕ ಪಿಡುಗು. ಹೊನ್ನು, ಹೆಣ್ಣು, ಮಣ್ಣು, ಯಾವುದೇ  ಆಗಲಿ ಪರರ ವಸ್ತುಗಳನ್ನು ಕಳುವುಮಾಡಬಾರದು. ಕಣ್ಣೆತ್ತಿಯೂ ಕೂಡ ನೋಡಬಾರದು. ಅದು ಮಾನಸಿಕ ಕಳುವಾಗುತ್ತದೆ.

 ಕೊಲಬೇಡ: ಕೊಲುವದು ಕೂಡ ಒಂದು ಮಹಾಪಾಪ. ಪ್ರಾಣ ನೀಡುವಶಕ್ತಿ ಇಲ್ಲದ ನಮಗೆ ಪ್ರಾಣ ತೆಗೆಯುವ ಹಕ್ಕೂ ಇಲ್ಲ.ಬೇರೆಯವರ ಮನಸನ್ನು ನೋಯಿಸುವದೂ ಕೂಡ ಮಾನಸಿಕ ಕೊಲೆಯಾಗುತ್ತದೆ.ಇದರಿಂದ ಹಿಂಸಾಚಾರ ಶುರುವಾಗಿಸಮಾಜದ ಶಾಂತಿ, ನೆಮ್ಮದಿ, ಹಾಳಾಗುತ್ತದೆ.

ಹುಸಿಯ ನುಡಿಯಲು ಬೇಡ: ನಮ್ಮ ಬದುಕು ಸತ್ಯದ ಅಡಿಪಾಯದ ಮೇಲೆ ನಿಂತಿರಬೇಕು. ಸತ್ಯದ ಮಾತಿಗೆ ಮೌಲ್ಯ ಇದೆ.ಸತ್ಯವಂತರಿಗೆ ಗೌರವವಿದೆ. ಸತ್ಯವಂತರು ನಿಷ್ಟುರಿ ಯಾದರೂ ಜಯ ಶತಸಿದ್ಧ.

ಮುನಿಯಬೇಡ: ಕೋಪ ಮನುಷ್ಯನ ಸ್ಥಿಮಿತವನ್ನು ತಪ್ಪಿಸಿ ಅವನನ್ನು  ಮೃಗವನ್ನಾಗಿ ಮಾಡುತ್ತದೆ. ಕೋಪ ಮನುಷ್ಯನ ಮೇಲೆದೈಹಿಕವಾಗಿ, ಮಾನಸಿಕವಾಗಿ, ದುಷ್ಪರಿಣಾಮ  ಬೀರುತ್ತದೆ.

ತನ್ನಬಣ್ಣಿಸಬೇಡ:ಇದು ಕಷ್ಟಕರವಾದ ಸೂತ್ರ.ತಮ್ಮನ್ನು ತಾವು ಸಮರ್ಥಿಸಿಕೊಳ್ಳ ಬೇಕೇ ಹೊರತು ಹೊಗಳಿಸಿಕೊಳ್ಳಬಾರದು. ಹೊಗಳಿಕೆಯಿಂದ ಮನುಷ್ಯನು ಬೀಗುತ್ತಾನೆ ಹೊರತು ವಿಕಸನಗೊಳ್ಳುವದಿಲ್ಲ. ಹೊಗಳಿಕೆ ಹೊನ್ನ ಶೂಲವೆನ್ನುತ್ತಾರೆ.

ಇದಿರು ಹಳಿಯಲು ಬೇಡ: ಬೇರೆಯವರನ್ನು ನಿಂದಿಸುವ ಬದಲು ನಮ್ಮನ್ನು ನಾವೇ ಆತ್ಮವಿಮರ್ಶಣೆಗೆ  ಒಳಪಡಿಸಿಕೊಳ್ಳಬೇಕು.ಅನ್ಯರನ್ನು ಹಳಿದು  ಅವರನ್ನು ಅವಮಾನಿಸಬಾರದು. ಇದು ನಮ್ಮ ಕೀಳರಿಮೆಯನ್ನು ತೋರಿಸುತ್ತದೆ.

ಅನ್ಯರಿಗೆ ಅಸಹ್ಯ ಪಡಬೇಡ: ಈ ಸೂತ್ರವೂ ಅತೀ ಮುಖ್ಯವಾದುದು. ಮನುಷ್ಯ ಸಮಾಜಜೀವಿ. ಅವನಿಗೂ ಸಮಾಜಕ್ಕೂಅವಿನಾಭಾವ ಸಂಬಧ. 

ಈ ಸಪ್ತಸೂತ್ರ ಗಳನ್ನು ಶುದ್ಧ ಮನಸ್ಸಿನಿಂದ ಪಾಲಿಸುವದರಿಂದ ಅಂತರಂಗ, ಬಹಿರಂಗ ಶುದ್ಧಿಯಾಗುತ್ತದೆ. ದೇವರನ್ನು ಒಲಿಸಿಕೊಳ್ಳುವ ಮಾರ್ಗವಾಗುತ್ತದೆ.