Thursday, June 6, 2013

ಶರಣ ಬಸವಣ್ಣನವರ ವಚನ~ಸಪ್ತಸೂತ್ರಗಳು

             ವಚನ ಸಂದೇಶ..
                                                    ಸಪ್ತಸೂತ್ರಗಳು
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ತನ್ನ ಬಣ್ಣಿಸಬೇಡ,
ಇದರ ಹಳಿಯಲು ಬೇಡ, ಅನ್ಯರಿಗೆ  ಅಸಹ್ಯ ಪಡಬೇಡ,
ಇದೇ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ,
                             ಇದೇ ನಮ್ಮ ಕೂಡಲಸಂಗಮ ದೇವರ ಒಲಿಸುವ ಪರಿ.                

                 ಸಂದೇಶ: 

ಬಸವಣ್ಣವರು ಈ ವಚನದ ಮೂಲಕ ಮಾನವ ಕುಲಕ್ಕೆ ಬದುಕಿನ ಮೌಲ್ಯಗಳನ್ನು ಸಪ್ತಸೂತ್ರಗಳರೂಪದಲ್ಲಿ ತಿಳಿಸಿದ್ದಾರೆ. ಈ ಸಪ್ತಸೂತ್ರಗಳು ಕೆಲವು ನಿಯಮಗಳನ್ನು ಹೊಂದಿವೆ.
 ಕಳಬೇಡ: ಕಳುವು ಇದೊಂದು ಸಾಮಾಜಿಕ ಪಿಡುಗು. ಹೊನ್ನು, ಹೆಣ್ಣು, ಮಣ್ಣು, ಯಾವುದೇ  ಆಗಲಿ ಪರರ ವಸ್ತುಗಳನ್ನು ಕಳುವುಮಾಡಬಾರದು. ಕಣ್ಣೆತ್ತಿಯೂ ಕೂಡ ನೋಡಬಾರದು. ಅದು ಮಾನಸಿಕ ಕಳುವಾಗುತ್ತದೆ.

 ಕೊಲಬೇಡ: ಕೊಲುವದು ಕೂಡ ಒಂದು ಮಹಾಪಾಪ. ಪ್ರಾಣ ನೀಡುವಶಕ್ತಿ ಇಲ್ಲದ ನಮಗೆ ಪ್ರಾಣ ತೆಗೆಯುವ ಹಕ್ಕೂ ಇಲ್ಲ.ಬೇರೆಯವರ ಮನಸನ್ನು ನೋಯಿಸುವದೂ ಕೂಡ ಮಾನಸಿಕ ಕೊಲೆಯಾಗುತ್ತದೆ.ಇದರಿಂದ ಹಿಂಸಾಚಾರ ಶುರುವಾಗಿಸಮಾಜದ ಶಾಂತಿ, ನೆಮ್ಮದಿ, ಹಾಳಾಗುತ್ತದೆ.

ಹುಸಿಯ ನುಡಿಯಲು ಬೇಡ: ನಮ್ಮ ಬದುಕು ಸತ್ಯದ ಅಡಿಪಾಯದ ಮೇಲೆ ನಿಂತಿರಬೇಕು. ಸತ್ಯದ ಮಾತಿಗೆ ಮೌಲ್ಯ ಇದೆ.ಸತ್ಯವಂತರಿಗೆ ಗೌರವವಿದೆ. ಸತ್ಯವಂತರು ನಿಷ್ಟುರಿ ಯಾದರೂ ಜಯ ಶತಸಿದ್ಧ.

ಮುನಿಯಬೇಡ: ಕೋಪ ಮನುಷ್ಯನ ಸ್ಥಿಮಿತವನ್ನು ತಪ್ಪಿಸಿ ಅವನನ್ನು  ಮೃಗವನ್ನಾಗಿ ಮಾಡುತ್ತದೆ. ಕೋಪ ಮನುಷ್ಯನ ಮೇಲೆದೈಹಿಕವಾಗಿ, ಮಾನಸಿಕವಾಗಿ, ದುಷ್ಪರಿಣಾಮ  ಬೀರುತ್ತದೆ.

ತನ್ನಬಣ್ಣಿಸಬೇಡ:ಇದು ಕಷ್ಟಕರವಾದ ಸೂತ್ರ.ತಮ್ಮನ್ನು ತಾವು ಸಮರ್ಥಿಸಿಕೊಳ್ಳ ಬೇಕೇ ಹೊರತು ಹೊಗಳಿಸಿಕೊಳ್ಳಬಾರದು. ಹೊಗಳಿಕೆಯಿಂದ ಮನುಷ್ಯನು ಬೀಗುತ್ತಾನೆ ಹೊರತು ವಿಕಸನಗೊಳ್ಳುವದಿಲ್ಲ. ಹೊಗಳಿಕೆ ಹೊನ್ನ ಶೂಲವೆನ್ನುತ್ತಾರೆ.

ಇದಿರು ಹಳಿಯಲು ಬೇಡ: ಬೇರೆಯವರನ್ನು ನಿಂದಿಸುವ ಬದಲು ನಮ್ಮನ್ನು ನಾವೇ ಆತ್ಮವಿಮರ್ಶಣೆಗೆ  ಒಳಪಡಿಸಿಕೊಳ್ಳಬೇಕು.ಅನ್ಯರನ್ನು ಹಳಿದು  ಅವರನ್ನು ಅವಮಾನಿಸಬಾರದು. ಇದು ನಮ್ಮ ಕೀಳರಿಮೆಯನ್ನು ತೋರಿಸುತ್ತದೆ.

ಅನ್ಯರಿಗೆ ಅಸಹ್ಯ ಪಡಬೇಡ: ಈ ಸೂತ್ರವೂ ಅತೀ ಮುಖ್ಯವಾದುದು. ಮನುಷ್ಯ ಸಮಾಜಜೀವಿ. ಅವನಿಗೂ ಸಮಾಜಕ್ಕೂಅವಿನಾಭಾವ ಸಂಬಧ. 

ಈ ಸಪ್ತಸೂತ್ರ ಗಳನ್ನು ಶುದ್ಧ ಮನಸ್ಸಿನಿಂದ ಪಾಲಿಸುವದರಿಂದ ಅಂತರಂಗ, ಬಹಿರಂಗ ಶುದ್ಧಿಯಾಗುತ್ತದೆ. ದೇವರನ್ನು ಒಲಿಸಿಕೊಳ್ಳುವ ಮಾರ್ಗವಾಗುತ್ತದೆ. 

No comments:

Post a Comment